ಇಪ್ಸಸ್ ಕದನ-
	ಕ್ರಿ.ಪೂ. 301ರಲ್ಲಿ ನಡೆದ ಈ ಕದನ ಐತಿಹಾಸಿಕ ಪ್ರಾಮುಖ್ಯ ಪಡೆದಿದೆ. ಅಲೆಕ್ಸಾಂಡರನ ಮರಣಾನಂತರ (ಕ್ರಿ. ಪೂ. 323) ಆತ ಜಯಿಸಿದ್ದ ವಿಶಾಲ ಚಕ್ರಾಧಿಪತ್ಯದ ನಾನಾಭಾಗಗಳನ್ನು ಅವನ ಸೇನಾಪತಿಗಳು ಸ್ವಾಧೀನಪಡಿಸಿಕೊಂಡು ಸ್ವತಂತ್ರವಾಗಿ ಆಳತೊಡಗಿದರು. ಒಂದು ಸಾಮ್ರಾಜ್ಯಕ್ಕೆ ಪ್ರತಿಯಾಗಿ ಅನೇಕ ಸಣ್ಣ ಸಣ್ಣ ರಾಜ್ಯಗಳಾದವು. ಇದರಲ್ಲಿ ವೈಮನಸ್ಯ ಕ್ರಮೇಣ ಬೆಳೆದು. ಕೊನೆಗೆ ಕ್ರಿ.ಪೂ. 302ರಲ್ಲಿ ಪೂರ್ವ ಏಷ್ಯದಲ್ಲಿ ದೊರೆಯಾಗಿದ್ದ ಆಂಟಿಗೋನಸ್‍ನ ಮಗ ಡೆಮಟ್ರಿಯಸ್ ಮ್ಯಾಸಿಡೋನಿಯರ ದೊರೆ ಕೆಸಾಂಡರನ ರಾಜ್ಯದ ಮೇಲೆ ನುಗ್ಗಿದಾಗ ದೊಡ್ಡ ಯುದ್ಧವೇ ಪ್ರಾರಂಭವಾಯಿತು. ಶತ್ರುವಿನ ಬಲವನ್ನರಿತ ಕೆಸಾಂಡರ್ ಮೊದಲು ಸಂಧಿ ಮಾಡಿಕೊಳ್ಳಲೊಪ್ಪಿದ. ಯಾವ ಷರತ್ತೂ ಇಲ್ಲದೆ ಶರಣಾಗತನಾಗಬೇಕೆಂದು ಆಂಟಿಗೋನಸ್ ಅವನಿಗೆ ತಿಳಿಸಿದ. ಯುದ್ಧವನ್ನು ನಡೆಸುವುದೇ ಮೇಲೆಂದು ನಿಶ್ಚಯಿಸಿ ಕೆಸಾಂಡರ್ ಪೂರ್ವ ಏಷ್ಯದಲ್ಲಿದ್ದ ತನ್ನ ಮಿತ್ರರಾಜರನ್ನು ಆಂಟಿಗೋನಸ್‍ನ ರಾಜ್ಯದ ಮೇಲೆ ದಾಳಿಯಿಡಲು ಕೇಳಿಕೊಂಡ. ಅವರು ಒಪ್ಪಿ ನಾನಾ ಕಡೆಯಿಂದ ನುಗ್ಗಿದರು. ತಂದೆಯ ನೆರವಿಗಾಗಿ ಡೆಮೆಟ್ರಿಯಸ್ ಮ್ಯಾಸಿಡೋನಿಯವನ್ನು ಬಿಟ್ಟು ಹಿಂತಿರುಗಬೇಕಾಯಿತು. ಫ್ರಿಜಿಯ ದೇಶದ ಇಪ್ಸನ್ ಎಂಬಲ್ಲಿ ಭಾರಿ ಕದನ ನಡೆಯಿತು. ಆಂಟಿಗೋನಸ್ ಸೋತು ರಣರಂಗದಲ್ಲಿ ಮಡಿದ. ಅಲೆಕ್ಸಾಂಡರ್ ನಿರ್ಮಿಸಿದ ಸಾಮ್ರಾಜ್ಯ ವ್ಯವಸ್ಥೆ ಮುಂದೆಂದೂ ತಲೆಯೆತ್ತಿದಂತೆ ಈ ಒಂದು ಕದನದಿಂದ ಮುರಿದು ಬಿತ್ತು.											  
 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ